ಮತ್ತೊಂದು ಒಲಿಂಪಿಕ್ ಪದಕ ಗೆಲ್ಲುವ ಹೊಸ್ತಿಲಲ್ಲಿ ಮನು ಭಾಕರ್‌..! ಇತಿಹಾಸ ಬರೆಯಲು ರೆಡಿ

1 min read

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿರುವ ಮನು ಭಾಕರ್‌, ಶೂಟಿಂಗ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಣಕ್ಕಿಳಿದಿರುವ ಭಾಕರ್‌, ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ. ಮಂಗಳವಾರ ದಕ್ಷಿಣ ಕೊರಿಯಾ ಜೋಡಿ ವಿರುದ್ಧ ಪಂದ್ಯ ನಡೆಯಲಿದೆ.

ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು-ಸರಬ್ಜೋತ್‌, 580 ಅಂಕಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಟರ್ಕಿ ಜೋಡಿ 582, ಸರ್ಬಿಯಾ ಜೋಡಿ 581 ಅಂಕ ಗಳಿಸಿ ಅಗ್ರ-2 ಸ್ಥಾನ ಪಡೆದ ಕಾರಣ ಪದಕ ಖಚಿತಪಡಿಸಿಕೊಂಡಿದ್ದು, ಚಿನ್ನದ ಪದಕಕ್ಕಾಗಿ ಪರಸ್ಪರ ಸೆಣಸಾಡಲಿವೆ. ಭಾರತ 580ರ ಬದಲು 583 ಅಂಕ ಗಳಿಸಿದ್ದರೆ ಪದಕ ಖಚಿತವಾಗುತಿತ್ತು. ಇದೇ ವೇಳೆ ದಕ್ಷಿಣ ಕೊರಿಯಾ 579 ಅಂಕ ಗಳಿಸಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಭಾರತೀಯರ ಕೈತಪ್ಪಿದ 2 ಪದಕ!

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸೋಮವಾರ 2 ಪದಕಗಳು ಕೈ ತಪ್ಪಿವೆ. ಇದರೊಂದಿಗೆ ಮನು ಭಾಕರ್‌ ಬಳಿಕ ಭಾರತಕ್ಕೆ ಮತ್ತೆ ಪದಕ ಗೆಲ್ಲಿಸಿಕೊಡುವ ಶೂಟರ್‌ಗಳ ಕನಸು ಭಗ್ನಗೊಂಡಿದೆ. ಇದರ ಹೊರತಾಗಿಯೂ ಭಾರತ ಶೂಟಿಂಗ್‌ನಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಇಟ್ಟುಕೊಂಡಿವೆ.

ಸೋಮವಾರ ಪುರುಷರ 10 ಮೀ. ಏರ್‌ ರೈಫಲ್‌ ಫೈನಲ್‌ ಸ್ಪರ್ಧೆಯಲ್ಲಿ ಅರ್ಜುನ್‌ 4ನೇ ಸ್ಥಾನ ಪಡೆದು ಅಲ್ಪದರಲ್ಲೇ ಪದಕ ತಪ್ಪಿಸಿಕೊಂಡರು. 8 ಶೂಟರ್‌ಗಳಿದ್ದ ಸ್ಪರ್ಧೆಯಲ್ಲಿ ಮೊದಲ 10 ಶಾಟ್‌ಗಳ ಬಳಿಕ 25 ವರ್ಷದ ಅರ್ಜುನ್‌ 105.0 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರು. ಆ ಬಳಿಕ 13ನೇ ಶಾಟ್‌ನಲ್ಲಿ ಕೇವಲ 9.9 ಅಂಕ ಗಳಿಸಿದ ಹೊರತಾಗಿಯೂ ಅರ್ಜುನ್‌ ಅಗ್ರ-2ರಲ್ಲಿ ಉಳಿದುಕೊಂಡಿದ್ದರು.

 

17ನೇ ಶಾಟ್‌ವರೆಗೂ 2ನೇ ಸ್ಥಾನ ಕಾಯ್ದುಕೊಂಡಿದ್ದ ಅರ್ಜುನ್‌ ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದರು. ಆದರೆ 18ನೇ ಶಾಟ್‌ನಲ್ಲಿ ಸ್ವೀಡನ್‌ ಹಾಗೂ ಕ್ರೊವೇಷಿಯಾದ ಶೂಟರ್‌ಗಳು ಅರ್ಜುನ್‌ರನ್ನು 4ನೇ ಸ್ಥಾನಕ್ಕೆ ತಳ್ಳಿದರು. ನಿರ್ಣಾಯಕ ಎನಿಸಿಕೊಂಡ 20ನೇ ಶಾಟ್‌ನಲ್ಲಿ ಒತ್ತಡಕ್ಕೊಳಗಾದ ಅರ್ಜುನ್‌ ಕೇವಲ 9.5 ಅಂಕ ಗಳಿಸಿದರು. ಇದರೊಂದಿಗೆ ಅರ್ಜುನ್‌ 4ನೇ ಸ್ಥಾನದಲ್ಲೇ ಉಳಿದು ಪದಕ ತಪ್ಪಿಸಿಕೊಂಡರು. ಒಟ್ಟು 20 ಯತ್ನಗಳ ಪೈಕಿ ಕೇವಲ 18ರಲ್ಲಿ 10ಕ್ಕಿಂತ ಹೆಚ್ಚು ಅಂಕ ಪಡೆದ ಹೊರತಾಗಿಯೂ, 2 ಕೆಟ್ಟ ಶಾಟ್‌ನಿಂದಾಗಿ ಪದಕ ವಂಚಿತರಾದರು.

ಚೀನಾದ ಶೆಂಗ್‌ ಲಿಹಾವೊ 252.2 ಅಂಕಗಳೊಂದಿಗೆ ಒಲಿಂಪಿಕ್ಸ್‌ ದಾಖಲೆ ಬರೆದು ಚಿನ್ನ ಗೆದ್ದರೆ, ಸ್ವೀಡನ್‌ನ ಲಿಂಗ್‌ರೆನ್‌ ವಿಕ್ಟರ್‌ 251.4 ಅಂಕದೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರು. ಕ್ರೊವೇಷಿಯಾದ ಮಾರಿಸಿಕ್‌ ಮಿರನ್‌(230.3) ಕಂಚು ಜಯಿಸಿದರು.

 

ರಮಿತಾಗೆ ನಿರಾಸೆ: ಇದೇ ವೇಳೆ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್‌ಗೆ 7ನೇ ಸ್ಥಾನ ಲಭಿಸಿತು. ಅವರು ಆರಂಭಿಕ 5 ಶಾಟ್‌ಗಳ ಬಳಿಕ 4ನೇ ಸ್ಥಾನದಲ್ಲಿದ್ದರೂ, 10 ಶಾಟ್‌ಗಳ ಬಳಿಕ 104.0 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಇದರಿಂದಾಗಿ ಬಳಿಕ 4 ಶಾಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ 145.3 ಅಂಕಗಳೊಂದಿಗೆ 7ನೇ ಸ್ಥಾನಿಯಾಗಿ ಅಭಿಯಾನ ಮುಕ್ತಾಯಗೊಳಿಸಿದರು.

ಅರ್ಜುನ್‌ ಹಾಗೂ ರಮಿತಾ ಕ್ರೀಡಾಕೂಟದಲ್ಲಿ 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರು. ಆದರೆ ಫೈನಲ್‌ಗೇರಲು ವಿಫಲರಾಗಿದ್ದರು.

You May Also Like

More From Author

+ There are no comments

Add yours