ಡ್ರಗ್ಸ್‌ ಸಾಗಣೆ ಕೇಸಲ್ಲಿ ಕಲಬುರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಂಧನ

1 min read

ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಸಾಗಿಸುತ್ತಿದ್ದ ಕಲಬುರಗಿಯ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೇರಿ ಮೂವರನ್ನು ಬಂಧಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಘಟನೆ ಬೆನ್ನಲ್ಲೇ ಬಂಧಿತ ಮುಖಂಡನನ್ನು ಪಕ್ಷದಿಂದ ಉಚ್ಚಾಟನೆ ಸಹ ಮಾಡಲಾಗಿದೆ.

 

 ಕಲಬುರಗಿ :  ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಿಷೇಧಿತ ಮಾದಕ ವಸ್ತು ಸಾಗಿಸುತ್ತಿದ್ದ ಕಲಬುರಗಿಯ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೇರಿ ಮೂವರನ್ನು ಬಂಧಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಘಟನೆ ಬೆನ್ನಲ್ಲೇ ಬಂಧಿತ ಮುಖಂಡನನ್ನು ಪಕ್ಷದಿಂದ ಉಚ್ಚಾಟನೆ ಸಹ ಮಾಡಲಾಗಿದೆ.

ಕಾಂಗ್ರೆಸ್ ಮುಖಂಡ ಲಿಂಗರಾಜ ಕಣ್ಣಿ (40), ಕಲಬುರಗಿ ನಿವಾಸಿ ಸಯ್ಯದ್ ಇರ್ಫಾನ್ (34) ಹಾಗೂ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿ ತೌಸಿಫ್‌ ಆಸಿಫ್ ತುರವೇ (34) ಬಂಧಿತರು.

ಶಾಸಕ ಅಲ್ಲಂಪ್ರಭು ಪಾಟೀಲ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಲಿಂಗರಾಜ, ಸಹಚರರಾದ ಸಯ್ಯದ್ ಹಾಗೂ ತೌಸಿಫ್‌ ಈ ಮೂವರು ನಿಷೇಧಿತ 120 ಕೊಡೆನೈನ್‌ ಸಿರಪ್‌ (ನಿಷೇಧಿತ ಕೆಮ್ಮಿನ ಸಿರಪ್‌) ಬಾಟಲ್‌ಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಮಹಾರಾಷ್ಟ್ರ ಬಜಾರ್‌ ಪೇಟ್‌ ಪೊಲೀಸರು ಥಾಣೆ ನಗರದ ಕಲ್ಯಾಣ ಎಪಿಎಂಸಿ ಮಾರುಕಟ್ಟೆಯ ಬಳಿ ಬಂಧಿಸಿದ್ದು, ₹27,000 ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ-1985ರ (ಎನ್‌ಡಿಪಿಎಸ್‌) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ತೌಸಿಫ್‌ ಎ1 ಆರೋಪಿಯಾಗಿದ್ದು, ಲಿಂಗರಾಜ ಎ2 ಮತ್ತು ಸಯ್ಯದ್ ಎ3 ಆರೋಪಿಗಳಾಗಿದ್ದಾರೆ. ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎನ್‌ಡಿಪಿಎಸ್‌ ಕಾಯ್ದೆಯಡಿಯ ಕೇಸ್‌ಗಳಲ್ಲಿ ಜಾಮೀನು ದೊರೆಯುವುದು ಕಷ್ಟ ಎನ್ನಲಾಗಿದೆ.

ರಾಜಕೀಯ ಸಂಚಲನ:

ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಲಿಂಗರಾಜ್ ಬಂಧನದಿಂದ ಆ ಭಾಗದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇವರು ಕಾಂಗ್ರೆಸ್‌ನ ಸಚಿವರು, ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆ ಬಿಜೆಪಿಯಲ್ಲಿ ಇದ್ದರು. 2023ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು.

ಘಟಾನುಘಟಿಗಳೊಂದಿಗೆ ಫೋಟೋ:

ಬಂಧಿತ ಲಿಂಗರಾಜ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಅಲ್ಲಂಪ್ರಭು ಪಾಟೀಲ್‌ ಅವರೊಂದಿಗೆ ಕೈ ಮಿಲಾಯಿಸಿರುವ, ಸಿಹಿ ತಿನ್ನಿಸುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕವಾಗಿ ಚರ್ಚೆ ಜೋರಾಗಿದೆ.

ಕಾಂಗ್ರೆಸ್‌ನಿಂದ ಕಣ್ಣಿ ಉಚ್ಚಾಟನೆ:

ಡ್ರಗ್ಸ್‌ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರ ಬಂಧನದಲ್ಲಿರುವ ಲಿಂಗರಾಜ ಕಣ್ಣಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ, ಎಂಎಲ್‌ಸಿ ಜಗದೇವ ಗುತ್ತೇದಾರ್‌ ಆದೇಶ ಹೊರಟಿಸಿದ್ದಾರೆ. ಲಿಂಗರಾಜ ಕಣ್ಣಿ ಇವರು ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಬಂದಿದ್ದು, ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್‌ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಗುತ್ತೇದಾರ್‌ ತಿಳಿಸಿದ್ದಾರೆ.

You May Also Like

More From Author

+ There are no comments

Add yours