ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರ ಆಯ್ಕೆ ಕಸರತ್ತು ಶುರುವಾಗಿದ್ದು, 20 ವರ್ಷಗಳ ಬಳಿಕ ವೈದ್ಯರ ಸಂದರ್ಶನ ಗುರುವಾರ ನಡೆದಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವೈದ್ಯರ ಸಂದರ್ಶನ ನಡೆಸಲಾಗಿದ್ದು, ಸಂದರ್ಶನದಲ್ಲಿ ಒಟ್ಟು 10 ಮಂದಿ ವೈದ್ಯರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಸಿಎಂ ನೇತೃತ್ವದ ಸಮಿತಿ ನಿರ್ದೇಶಕರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿರ್ದೇಶಕರ ನೇಮಕ ವಿಚಾರ ಸಂಬಂಧ ಕೋರ್ಟ್ ನಲ್ಲಿ ಕೇಸ್ ಇರುವುದರಿಂದ ಆಯ್ಕೆಯನ್ನು ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಡಾ.ಸಿ.ಎನ್.ಮಂಜುನಾಥ್ ಸುದೀರ್ಘ 17 ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶಕರಾಗಿದ್ದರು. 2023ರ ಅಂತ್ಯದವರೆಗೂ ಡಾ.ಸಿ.ಎನ್.ಮಂಜುನಾಥ್ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶಕರಾಗಿದ್ದರು.ಬಳಿಕ ರಾಜಕೀಯ ರಂಗ ಪ್ರವೇಶಿಸಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮಂಜುನಾಥ್ ಅವರಿಂದ ತೆರವಾದ ಸ್ಥಾನಕ್ಕೆ ಪ್ರಸ್ತುತ ಡಾ.ರವೀಂದ್ರನಾಥ್ ಸಂಸ್ಥೆಯ ಹಂಗಾಮಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ರವೀಂದ್ರನಾಥ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿರ್ದೇಶಕರ ನೇಮಕ ಮಾಡಬೇಕಿದೆ.
+ There are no comments
Add yours