ನಮ್ಮದು ರೈತರಿಗೆ ಅನ್ಯಾಯ ಮಾಡುವ ಸರ್ಕಾರವಲ್ಲ; ಕಬ್ಬು ದರ ಪರಿಹಾರ ನಿರ್ಧಾರ ಸ್ವಾಗತಿಸಿದ ಡಿಕೆ ಶಿವಕುಮಾರ್

1 min read

ಬೆಂಗಳೂರು: ಬೆಳಗಾವಿ ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮ್ಯಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು
ಪ್ರತಿ ಟನ್‌ ಕಬ್ಬಿಗೆ 3,300 ದರ ನಿಗದಿ ಮಾಡಿದೆ. ಈ ಪೈಕಿ 3,250 ರೂ. ಅನ್ನು ಸಕ್ಕರೆ ಕಾರ್ಖಾನೆಗಳು ಮತ್ತು 50 ರೂ. ಅನ್ನು ರಾಜ್ಯ ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ನ.7-ಶುಕ್ರವಾರ) ನಡೆದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗಿನ ಸತತ ಏಳು ಗಂಟೆಗಳ ಸಭೆ ಬಳಿಕ, ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಹೊಸ ದರಗಳನ್ನು ಘೋಷಿಸಿದರು. ಅಲ್ಲದೇ ಪ್ರತಿಭಟನೆಯನ್ನು ಹಿಂಪಡೆಯುವಂತೆ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿದರು.

ಇನ್ನು ಈ ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರತಿ ಟನ್‌ ಕಬ್ಬಿಗೆ 3,300 ರೂ. ದರ ನಿಗದಿಪಡಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಡಿಕೆಶಿ, “ನಮ್ಮ ಸರ್ಕಾರ ಅನ್ನದಾತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ಕಬ್ಬು ಬೆಳೆಗಾರರ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆ ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ಕಬ್ಬು ದರ ನಿಗದಿ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದರು.

ಬೆಳಗಾವಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 11.25 ಇಳುವರಿ ಬರುವ ಪ್ರತಿ ಟನ್ ಕಬ್ಬಿಗೆ ₹3,200 ಕೊಡುವ ನಿರ್ಧಾರಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದರು. ಈಗ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50 ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇರಿಸಿ ರೈತರಿಗೆ ಟನ್ ಗೆ ₹3,300 ಕೊಡಲು ತೀರ್ಮಾನಿಸಲಾಗಿದೆ.

ಕಬ್ಬಿನ ಇಳುವರಿ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ಆದರೆ, ಇಂದಿನ ಸಭೆಯ ತೀರ್ಮಾನದಂತೆ ಎಲ್ಲಾ ಇಳುವರಿಗೂ 100 ರೂ. ಹೆಚ್ಚಳ ಆಗಲಿದೆ. ನಮ್ಮದು ರೈತ ಪರ ಸರ್ಕಾರವಾಗಿದ್ದು, ಅನ್ನದಾತರಿಗೆ ಎಂದಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸುದೀರ್ಘ ಎಕ್ಸ್‌ ಪೋಸ್ಟ್‌ ಮಾಡಿದ್ದಾರೆ.

You May Also Like

More From Author

+ There are no comments

Add yours