ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪರದಾಡುತ್ತಿರುವವರಿಗೆ ಸಿಹಿಸುದ್ದಿ;‌ ಶೀಘ್ರವೇ ಹೊಸ ಪಡಿತರ ಚೀಟಿ ಲಭ್ಯ ಎಂದ ಸಚಿವ ಮುನಿಯಪ್ಪ

1 min read

ಹೈಲೈಟ್ಸ್‌:

  • ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಗುಡ್‌ನ್ಯೂಸ್‌
  • ಮುಂದಿನ ಒಂದೆರಡು ತಿಂಗಳಲ್ಲಿ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಭರವಸೆ ಕೊಟ್ಟ ಸಚಿವ ಮುನಿಯಪ್ಪ
  • ಮುಂದಿನ ತಿಂಗಳಿಂದ ತೊಗರಿ ಬೇಳೆ, ಸಕ್ಕರೆ, ಎಣ್ಣೆ ಸೇರಿ ಹಲವು ಪದಾರ್ಥವುಳ್ಳ ಇಂದಿರಾ ಕಿಟ್‌ ವಿತರಣೆ ಮಾಡಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದರು

ಕಲಬುರಗಿ: ಕಳೆದ ಎರಡೂವರೆ ವರ್ಷದಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸದವರಿಗೆ ಮುಂದಿನ ಒಂದೆರಡು ತಿಂಗಳಲ್ಲಿ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದ ಐವಾನ್‌ ಎ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಮಾತನಾಡಿದ ಅವರು, ಪರಿಷ್ಕರಣೆ ಸೇರಿ ನಾನಾ ಕಾರಣಗಳಿಂದ ಕಳೆದ ಎರಡೂವರೆ ವರ್ಷದಿಂದ ಹೊಸ ಪಡಿತರ ಚೀಟಿ ನೀಡಲು ಸಾಧ್ಯವಾಗಿಲ್ಲ. ಸುಮಾರು 2.5ರಿಂದ 3ಲಕ್ಷ ಅರ್ಜಿ ಗಳು ಸದ್ಯ ಬಾಕಿ ಇರುವ ಮಾಹಿತಿ ಇದ್ದು, ಎಲ್ಲವೂ ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ಶೀಘ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಇಂದಿರಾ ಕಿಟ್‌ನಲ್ಲಿ ಏನೆಲ್ಲ ಇರಲಿದೆ ?

ʻಇಂದಿರಾ ಕಿಟ್’ ವಿತರಣೆ ಶೀಘ್ರ ಪಡಿತರದಲ್ಲಿಅನ್ನ ಭಾಗ್ಯ ಯೋಜನೆಯ ಐದು ಕೆ.ಜಿ ಅಕ್ಕಿಯ ಬದಲಾಗಿ ಜನೆವರಿ ಅಂತ್ಯ ಅಥವಾ ಮುಂದಿನ ತಿಂಗಳಿಂದ ತೊಗರಿ ಬೇಳೆ, ಸಕ್ಕರೆ, ಎಣ್ಣೆ ಮತ್ತು ಉಪ್ಪು ಇರುವ ಪೌಷ್ಟಿಕ ಇಂದಿರಾ ಕಿಟ್‌ ವಿತರಣೆ ಮಾಡಲಾಗುವುದು.

4.50 ಕೋಟಿ ಜನರಿಗೆ ಲಾಭ

ಅಕ್ಕಿಯ ಸದುಪಯೋಗ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ಪಡಿತರ ಅಂಗಡಿಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ಯೋಜನೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಪೌಷ್ಟಿಕ ಆಹಾರ ಕಿಟ್‌ಗಾಗಿ ತೊಗರಿ ಬೇಳೆ ಖರೀದಿ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡಿ ಎಂದು ಈಗಾಗಲೇ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಸಲಹೆ ಹೇಳಿದ್ದಾರೆ. ಕಿಟ್‌ಗಳ ತಯಾರು ಮಾಡುವ ಕಂಪನಿ ಜತೆಗೆ ಮಾತನಾಡಿ, ಸೂಚನೆ ನೀಡಲಾಗುವುದು ಎಂದು ಹೇಳಿದ ಅವರು, ರಾಜ್ಯದ ಸುಮಾರು 1.5 ಲಕ್ಷ ಕಾರ್ಡ್‌ಗಳ 4.50 ಕೋಟಿ ಜನರಿಗೆ ಲಾಭ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ,ಜಿ. ವಿಜಯಕುಮಾರ, ಮಲ್ಲಿಕಾರ್ಜುನ ಜೀನಕೇರಿ, ರಮೇಶ ವಾಡೇಕರ್‌, ಲಿಂಗರಾಜ ತಾರಫೈಲ್‌ ಸೇರಿ ಇತರರಿದ್ದರು. ರಾಜ್ಯದಿಂದಲೂ ಪರಿಷ್ಕರಣೆ ಕೇಂದ್ರ ಸರಕಾರ ಈಗಾಗಲೇ 7.5 ಲಕ್ಷ ಬಿಪಿಎಲ್‌ ಕಾರ್ಡ್‌ ಅರ್ಹತೆ ಹೊಂದಿಲ್ಲಎಂದು ತಿಳಿಸಿದ್ದಾರೆ. ಇದೀಗ ರಾಜ್ಯ ಸರಕಾರ ಕೂಡ ಅವುಗಳ ನೈಜತೆ ಕುರಿತು ಪರಿಶೀಲನೆ ಮಾಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆ.ಎಚ್‌.ಮುನಿಯಪ್ಪ ಹೇಳಿದರು. ಸದ್ಯ ದಕ್ಷಿಣ ಭಾರತದಲ್ಲಿಹೆಚ್ಚಿನ ಬಿಪಿಎಲ್‌ ಕಾರ್ಡ್‌ ಕರ್ನಾಟಕದಲ್ಲಿವೆ. ಇಲ್ಲಿಅವಿಭಕ್ತ ಕುಟುಂಬ ಕಡಿಮೆಯಾಗಿರುವುದು ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಇರುವ ನಿಯಮಗಳಂತೆ ಕಾರ್ಡ್‌ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

You May Also Like

More From Author

+ There are no comments

Add yours