ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!

1 min read

ಬೆಂಗಳೂರು(ಡಿ.08) ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ ಆರೋಗ್ಯದಲ್ಲಿ ಇಂದು ಏರುಪೇರಾಗಿತ್ತು. ಹೀಗಾಗಿ ದಿಢೀರ್ ಆಸ್ಪತ್ರೆ ದಾಖಲಿಸಲಾಗಿತ್ತು. ಅಷ್ಟರೊಳಗೆ ಲೀಲಾವತಿ ನಿಧನರಾಗಿದ್ದಾರೆ.  ಆದರೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಂತೆ ವಿನೋದ್ ರಾಜ್‌ಗೆ ತಾಯಿಯ ಪರಿಸ್ಥಿತಿ ನೋಡಿ ಅಸ್ವಸ್ಥಗೊಂಡಿದ್ದಾರೆ. ತಾಯಿಯ ಅಗಲಿಕೆ ನೋವಿನಿಂದ ರಸ್ತೆಯಲ್ಲೇ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ.

ವಿನೋದ್ ರಾಜ್-ಲೀಲಾವತಿಯ ತಾಯಿ ಮಗನ ಸಂಬಂಧ ಎಲ್ಲರಿಗೂ ಮಾದರಿಯಾಗಿತ್ತು. ತಾಯಿಯನ್ನು ಅತೀಯಾಗಿ ಪ್ರೀತಿಸುತ್ತಿದ್ದ ವಿನೋದ್ ರಾಜ್ ಮಗುವಿನಂತೆ ನೋಡಿಕೊಂಡಿದ್ದರು. ತಾಯಿಯನ್ನು ಬಿಟ್ಟು ಒಂದು ಕ್ಷಣ ಅತ್ತಿತ್ತ ತೆರಳುತ್ತಿರಲಿಲ್ಲ. ಇತ್ತ ಪುತ್ರ ವಿನೋದ್ ರಾಜ್ ಮೇಲೆ ಲೀಲಾವತಿಗೆ ಎಲ್ಲಿಲ್ಲದ ಪ್ರೀತಿ. ಇವರಿಬ್ಬರ ಸಂಬಂಧಕ್ಕೆ ಕರ್ನಾಟಕವೇ ತಲೆಬಾಗಿತ್ತು. ತಾಯಿ ಸೇವೆ ಮಾಡುತ್ತಾ ವಿನೋದ್ ರಾಜ್ ಆನಂದ ಕಂಡುಕೊಂಡಿದ್ದಾರೆ. ತಾಯಿಯನ್ನು ಈ ರೀತಿ ನೋಡಿಕೊಳ್ಳುವ, ಸೇವೆ ಮಾಡುವ ಮಗ ಈ ಜಗತ್ತಿನಲ್ಲಿ ಯಾರೂ ಇಲ್ಲ ಅನ್ನೋ ಮಾತುಗಳನ್ನು ಚಿತ್ರರಂಗ ಹಲವು ಹಿರಿಯರು ಹೇಳಿದ್ದಾರೆ.

ಕಳೆದೊಂದು ವಾರದಿಂದ ಲೀಲಾವತಿ ಆರೋಗ್ಯ ಕ್ಷೀಣಿಸಿತ್ತು.  ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಮನೆಯಲ್ಲೇ ಲೀಲಾವತಿಗೆ ಚಿಕಿತ್ಸೆ ನೀಡಲಾಗುತಿತ್ತು. ನಟ ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾಗಿರುವ ಲೀಲಾವತಿ ಯಾರ ನೆರವೂ ಇಲ್ಲದೆ, ಯಾವುದೇ ಬೆಂಬಲ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಅತೀ ದೊಡ್ಡ ಹೆಸರು ಮಾಡಿದ ನಟಿ. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲಾ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ, ಇತ್ತೀಚಗಷ್ಟೇ ಜೀವಮಾನ ಶ್ರೇಷ್ಠ ಸಾಧನೆಗಾಗಿ ನಂದಿ ಪ್ರಶಸ್ತಿ ಪಡೆದುಕೊಂಡ ನಟಿ ಲೀಲಾವತಿ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

You May Also Like

More From Author

+ There are no comments

Add yours