ಮೋದಿಯವರಿಗೆ ಮತ್ತೆ ಅಧಿಕಾರ ಸಿಕ್ಕಿದರೆ ಭಾರತ ರಾಮರಾಜ್ಯ: ಮೋಹನ್‌ದಾಸ್‌ ಪೈ ಅಭಿಮತ

1 min read

ಹೈಲೈಟ್ಸ್‌:

  • 75 ವರ್ಷಗಳಾದ ಬಳಿಕ ನಮಗೆ ಮೋದಿಯಂತಹ ಉತ್ತಮ ನಾಯಕ ಸಿಕ್ಕಿದ್ದಾರೆ
  • ದೇಶದ ಜಿಡಿಪಿಯು 2029ರ ಹೊತ್ತಿಗೆ 6.5 ಟ್ರಿಲಿಯನ್‌ಗೆ ಏರಿಕೆಯಾಗಲಿದೆ
  • ಮತ್ತೆ ಅಧಿಕಾರ ಸಿಕ್ಕಿದರೆ ಮುಂದಿನ 5 ವರ್ಷಗಳಲ್ಲಿ ಭಾರತ ರಾಮರಾಜ್ಯವಾಗಲಿದೆ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕ ನಮಗೆ ನರೇಂದ್ರ ಮೋದಿ ಅವರಂತಹ ಒಬ್ಬ ಉತ್ತಮ ನಾಯಕರು ಸಿಕ್ಕಿದ್ದಾರೆ. ಇವರಿಗೆ ಮತ್ತೆ ಅಧಿಕಾರ ಸಿಕ್ಕಿದರೆ ಮುಂದಿನ 5 ವರ್ಷಗಳಲ್ಲಿ ಭಾರತ ರಾಮರಾಜ್ಯವಾಗಲಿದೆ ಎಂದು ಇನ್ಫೋಸಿಸ್‌ ಮಾಜಿ ನಿರ್ದೇಶಕ ಟಿವಿ ಮೋಹನ್‌ದಾಸ್‌ ಪೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ಅಕಾಡೆಮಿಯು ನಗರದ ಬಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೇಖಕ ಶಂತನು ಗುಪ್ತ ರಚಿಸಿರುವ ‘101 ರೀಸನ್ಸ್‌- ವೈ ಐ ವಿಲ್‌ ವೋಟ್‌ ಫಾರ್‌ ಮೋದಿ’ ಗ್ರಾಫಿಕ್‌ ನಾವೆಲ್‌ (ಮೋದಿ ಅವರ ಜನಪರ ಯೋಜನೆಗಳ ಗ್ರಾಫಿಕ್‌ ಚಿತ್ರಗಳ ಕಥಾಧಾರಿತ) ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ದೊರೆತಿರುವ ಉತ್ತಮ ನಾಯಕನನ್ನು ಕಳೆದುಕೊಳ್ಳಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಕೂಡ ಅಧಿಕಾರಕ್ಕೆ ಬಂದರೆ ದೇಶದ ಜಿಡಿಪಿಯು 2029ರ ಹೊತ್ತಿಗೆ 6.5 ಟ್ರಿಲಿಯನ್‌ಗೆ ಏರಿಕೆಯಾಗಲಿದೆ. ಎಲ್ಲರಿಗೂ ಅಗತ್ಯ ಮೂಲಭೂತ ಸೌಲಭ್ಯಗಳು ಲಭಿಸಿ, ನಿರ್ಭೀತಿಯಿಂದ ಓಡಾಡುವಂತಾದರೆ ಅದೇ ರಾಮರಾಜ್ಯ. ನಾನು ದೇಶಪ್ರೇಮಿ. ಇಲ್ಲಿ ನ್ಯಾಯ, ಶಾಂತಿ, ಅಭಿವೃದ್ಧಿ ನೆಲೆಸಬೇಕೆಂಬ ಕಾರಣಕ್ಕೆ ನಾನು ನರೇಂದ್ರ ಮೋದಿ ಅವರಿಗೆ ಮತ ಹಾಕಲು ಇಚ್ಛಿಸುತ್ತೇನೆ. ನೀವೂ ಸಹ ದೇಶ ಮುನ್ನಡೆಸುವ ಸೂಕ್ತ ಅಭ್ಯರ್ಥಿಗೆ ಮತ ಹಾಕಿ,” ಎಂದು ಕಿವಿಮಾತು ಹೇಳಿದರು.

”ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ 1980ರಲ್ಲಿ ಭಾರತದ ಆರ್ಥಿಕತೆ ಕುಸಿದಿತ್ತು. 1991ರಲ್ಲಿ 5.32 ಲಕ್ಷ ಕೋಟಿಯಿದ್ದ ದೇಶದ ಜಿಡಿಪಿಯು 2024ರ ಮಾರ್ಚ್ ಅಂತ್ಯಕ್ಕೆ 294 ಲಕ್ಷ ಕೋಟಿಗೆ ಏರಿಕೆಯಾಗಿದೆ. ನರೇಂದ್ರ ಮೋದಿ ಅವರು ಬಂದಾಗ 130 ಲಕ್ಷ ಕೋಟಿಯಿದ್ದ ಜಿಡಿಪಿ 294 ಲಕ್ಷ ಕೋಟಿಗೆ ಏರಿದೆ. ಚೀನಾ ಹೊರತುಪಡಿಸಿ ವಿಶ್ವದಲ್ಲಿ ಬೇರಾವ ದೇಶವೂ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂದಿಲ್ಲ. ಚೀನಾದಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಟ್ಟ ಹಿನ್ನೆಲೆಯಲ್ಲಿ ಶೇ. 96ರಷ್ಟು ಸಾಕ್ಷರತೆ ಇದೆ. ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ. 75ರಷ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ,” ಎಂದು ಮೋಹನ್‌ ದಾಸ್‌ ಪೈ ಅವರು ಶ್ಲಾಘಿಸಿದರು.

ಮೋದಿಯಂತಹ ನಾಯಕ ಯಾವ ಪ್ರತಿಪಕ್ಷದಲ್ಲೂ ಇಲ್ಲ

ಶಾಸಕ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ”ನರೇಂದ್ರ ಮೋದಿಯಂತಹ ನಾಯಕ, ಅವರಿಗೆ ಹೋಲಿಕೆ ಮಾಡುವಂತಹ ವ್ಯಕ್ತಿ ಯಾವುದೇ ಪಕ್ಷದಲ್ಲಿ ಇಲ್ಲ. ಇನ್ನೂ 12 ದಿನ ಕಾಲವಕಾಶ ಇದೆ. ಮುಂದಿನ ಪೀಳಿಗೆಗೆ ಹಾಗೂ ದೇಶದ ಉತ್ತಮ ಭವಿಷ್ಯಕ್ಕಾಗಿ ನಮಗೆಲ್ಲ ನರೇಂದ್ರ ಮೋದಿ ಬೇಕು,” ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಗೋಪಿನಾಥ್‌ ರೆಡ್ಡಿ, ಬೆಂಗಳೂರು ಕೇಂದ್ರ ವಿಭಾಗದ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ, ಲೇಖಕ ಶಂತನು ಗುಪ್ತ, ಬಿಜೆಪಿ ವಕ್ತಾರೆ ಶಾಜಿಯಾ ಇಲ್ಮಿ ಮತ್ತಿತರರು ಉಪಸ್ಥಿತರಿದ್ದರು.

 

You May Also Like

More From Author

+ There are no comments

Add yours