Employee Rights : ಉದ್ಯೋಗಿಗಳ ಹಕ್ಕುಗಳ ಕುರಿತು Kerala High Court ಐತಿಹಾಸಿಕ ತೀರ್ಪು ನೀಡಿದೆ. ವೈಯಕ್ತಿಕ ಕಾರಣಗಳಿಂದ ಒಬ್ಬ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಅದನ್ನು ಸ್ವೀಕರಿಸಲು ನಿರಾಕರಿಸುವ ಅಧಿಕಾರ ಆಡಳಿತ ಮಂಡಳಿಗೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. “ಉದ್ಯೋಗಿ ಗುಲಾಮನಲ್ಲ” ಎಂದು ಪೀಠವು ಕಟುವಾಗಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರು ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಅವರ ತಂದೆ ನಿಧನರಾದ ನಂತರ, ತಾಯಿ ಗಂಭೀರ ಮಾನಸಿಕ ಮತ್ತು ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದ್ದ ಕಾರಣ, ಅರ್ಜಿದಾರರು ರಾಜೀನಾಮೆ ನೀಡಿ ಮನೆಗೆ ಹತ್ತಿರದ ಉದ್ಯೋಗ ಹುಡುಕಲು ನಿರ್ಧರಿಸಿದರು.
ಆದರೆ ಕಂಪನಿ ಆರ್ಥಿಕ ಕಾರಣಗಳು ಹಾಗೂ ಕೆಲಸದ ಒತ್ತಡವನ್ನು ಉಲ್ಲೇಖಿಸಿ ರಾಜೀನಾಮೆಯನ್ನು ತಿರಸ್ಕರಿಸಿತು. ಅಕ್ಟೋಬರ್ 2022ರಿಂದ ಸಂಬಳವನ್ನು ನಿಲ್ಲಿಸಲಾಯಿತು. ರಾಜೀನಾಮೆ ಅಂಗೀಕಾರವಿಲ್ಲದೆ ಬೇರೆ ಉದ್ಯೋಗ ಸೇರುವುದಕ್ಕೂ ಅವಕಾಶ ಇರಲಿಲ್ಲ. ಇದರಿಂದ ಸಂಕಷ್ಟಕ್ಕೊಳಗಾದ ಅವರು ಹೈಕೋರ್ಟ್ ಮೊರೆ ಹೋದರು.
ಸಂವಿಧಾನದ ವಿಧಿ 23 ಉಲ್ಲೇಖ
ತೀರ್ಪು ನೀಡುವ ವೇಳೆ ನ್ಯಾಯಾಲಯವು ಭಾರತದ ಸಂವಿಧಾನದ 23 ನೇ ವಿಧಿಯನ್ನು ಉಲ್ಲೇಖಿಸಿತು. ಈ ವಿಧಿಯ ಪ್ರಕಾರ ದೇಶದಲ್ಲಿ ಬಲವಂತದ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಿಸಲಾಗಿದೆ.
ಒಬ್ಬ ಉದ್ಯೋಗಿ ತನ್ನ ಇಚ್ಛೆಯಿಂದ ಸಂಸ್ಥೆಯನ್ನು ತೊರೆಯಲು ನಿರ್ಧರಿಸಿದಾಗ, ಕಾನೂನುಬದ್ಧ ಅಡ್ಡಿಯಿಲ್ಲದೆ ಅವರನ್ನು ಬಲವಂತವಾಗಿ ಮುಂದುವರಿಸಲು ಒತ್ತಾಯಿಸುವುದು ಅಸಂವಿಧಾನಿಕ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶ ಏನು?
ನ್ಯಾಯಾಲಯ ಕಂಪನಿಯ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕು. ತಡೆಹಿಡಿದ ಸಂಬಳ, ಬಾಕಿ ವೇತನ, ಗ್ರಾಚ್ಯುಟಿ, ಪಿಎಫ್ ಹಾಗೂ ಇತರ ಪ್ರಯೋಜನಗಳನ್ನು ಎರಡು ತಿಂಗಳೊಳಗೆ ಪಾವತಿಸಬೇಕು. ಉದ್ಯೋಗ ಒಪ್ಪಂದದಲ್ಲಿ ಗಂಭೀರ ಕಾನೂನು ಅಡೆತಡೆಗಳಿಲ್ಲದಿದ್ದರೆ ಮೊಂಡುತನ ತೋರಬಾರದು ಎಂದು ಸ್ಪಷ್ಟ ಆದೇಶ ನೀಡಿತು.
ತೀರ್ಪಿನ ಮಹತ್ವ
ಈ ತೀರ್ಪು ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳಿಗೆ ಮಹತ್ವದ ಸಂದೇಶ ನೀಡಿದೆ. ಉದ್ಯೋಗಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಯಾವುದೇ ಸಂಸ್ಥೆ ಲೆಕ್ಕಿಸದೆ ಇರಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಮತ್ತೊಮ್ಮೆ ದೃಢಪಡಿಸಿದೆ.

+ There are no comments
Add yours