ಹೈಲೈಟ್ಸ್:
- ಬೇಸಿಗೆ ದಿಢೀರ್ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ನಷ್ಟ
- ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ರೈತರು
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ 142 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ನಷ್ಟ
ಚಿಕ್ಕಬಳ್ಳಾಪುರ : ಹಲವು ವರ್ಷಗಳ ನಂತರ ಈ ಬಾರಿ ಒಳ್ಳೆಯ ಫಸಲು ಬಂದಿತ್ತು. ಇನ್ನೊಂದೆರಡು ತಿಂಗಳಿದ್ದರೆ ಕೈಗೆ ಫಸಲು ಬರುತ್ತಿತ್ತು. ಆದರೆ ದಿಢೀರ್ ಎಂದು ಸುರಿದ ಆಲಿಕಲ್ಲು ಮಳೆಯಿಂದ ಇಡೀ ತೋಟ ನಾಶವಾಗಿದೆ. ದ್ರಾಕ್ಷಿ ಗೊಂಚಲಿನ ಶೇ.40ರಷ್ಟು ಕಾಯಿಗೆ ಆಲಿಕಲ್ಲು ತಗುಲಿ ಛಿದ್ರವಾಗಿವೆ. ಇನ್ನುಳಿದ ದ್ರಾಕ್ಷಿ ಹಣ್ಣಾಗುತ್ತೋ ಇಲ್ಲವೋ ಗೊತ್ತಿಲ್ಲ..
ಇದು ಇತ್ತೀಚೆಗೆ ಜಿಲ್ಲೆಯ ಹಲವೆಡೆ ದಿಢೀರ್ ಎಂದು ಸುರಿದ ಬೇಸಿಗೆ ಆಲಿಕಲ್ಲು ಮಳೆಯ ಅವಾಂತರ. ಜೂನ್ ವೇಳೆಗೆ ಕೊಯ್ಲಿಗೆ ಬರುತ್ತಿದ್ದ ದ್ರಾಕ್ಷಿ ಬೆಳೆಯಲ್ಲಿ ಈಗಷ್ಟೇ ಕಾಯಾಗಿ ಬೆಳೆಯುತ್ತಿತ್ತು. ಆದರೆ ಏಕಾಏಕಿ ಸುರಿದ ಆಲಿಕಲ್ಲುಮಳೆ ಬೆಳೆಯನ್ನು ಆಪೋಶನ ತೆಗೆದುಕೊಂಡಿದೆ. ಆಲಿಕಲ್ಲುಹೊಡೆತ ವಿಷಕಾರಿಯಾಗಿರುವುದರಿಂದ ಗೊಂಚಲಿನಲ್ಲಿಉಳಿದ ಹಣ್ಣು ಉಳಿಯುವುದೇ ಅನುಮಾನ ಎನ್ನುವ ಪರಿಸ್ಥಿತಿ ಇದೆ.
ರೋಗ ಭೀತಿ :
ಮಳೆಯ ತೇವಾಂಶ ಮತ್ತು ಆಲಿಕಲ್ಲಿನ ಪೆಟ್ಟಿನಿಂದಾಗಿ ದ್ರಾಕ್ಷಿಯಲ್ಲಿ ನೈಟ್ರೋಜನ್ ಪ್ರಮಾಣ ಹೆಚ್ಚಾಗಿ, ಹಣ್ಣುಗಳು ಬೇಗನೆ ಕೊಳೆಯುವ ಭೀತಿ ಎದುರಾಗಿದೆ. ಇದರಿಂದ ಒಳ್ಳೆಯ ಫಸಲು ಸಿಗುವ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಆಲಿಕಲ್ಲುಮಳೆಯಿಂದ ತೊಂದರೆಗೀಡಾದ ತೋಟಗಳ ದ್ರಾಕ್ಷಿಗೆ ಮಾರುಕಟ್ಟೆಯಲ್ಲೂಸಮಸ್ಯೆಯಾಗಲಿದ್ದು, ಲಕ್ಷಾಂತರ ರೂ. ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ. ಇದರಿಂದ ಮಾವು ಬೆಳೆಗಾರರಿಗೆ ಸಮಸ್ಯೆ ಎದುರಾಗಿದೆ.
ನಿರೀಕ್ಷೆ ಬುಡಮೇಲು :
ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಕೆಲವು ವರ್ಷಗಳಿಂದ ಬೆಲೆ ಏರಿಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ತೋಟಗಳಲ್ಲಿಉತ್ತಮ ಫಸಲು ಬಂದಿತ್ತು. ಆದರೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ ವ್ಯಾಪ್ತಿಯಲ್ಲಿ ಸುರಿದ ಬೇಸಿಗೆ ಆಲಿಕಲ್ಲುಮಳೆ ರೈತರ ನಿರೀಕ್ಷೆಯನ್ನು ಬುಡಮೇಲು ಮಾಡಿದೆ. ಸದ್ಯ ಆಲಿಕಲ್ಲುಮಳೆಯಿಂದ ಹಾಳಾಗಿ ಉಳಿದಿರುವ ಬೆಳೆಯನ್ನು ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜಿಲ್ಲಾದ್ಯಂತ ಈಗಾಗಲೇ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳೆ ಹಾನಿ ವರದಿಯನ್ನು ತಯಾರಿಸಲು ಸೂಚನೆ ನೀಡಲಾಗಿದೆ. ಇಲಾಖೆಗಳಿಂದ ವರದಿ ಬಂದ ನಂತರ ಬೆಳೆ ಹಾನಿ ಪ್ರಮಾಣವನ್ನು ಆಧರಿಸಿ ಪರಿಹಾರ ಸಿಗಲಿದೆ. ಆದರೆ ಸರಕಾರ ನೀಡುವ ಅಲ್ಪ ಪರಿಹಾರ ರೈತರಿಗೆ ಎಷ್ಟರ ಮಟ್ಟಿಗೆ ನೆರವಾಗಲಿದೆ ಎಂಬುದೇ ಈಗ ಪ್ರಶ್ನೆ.
ಜಿಲ್ಲಾದ್ಯಂತ ಸುರಿದ ಆಲಿಕಲ್ಲು ಸಹಿತ ಭಾರಿ ಬಿರುಗಾಳಿ ಮಳೆಯಿಂದ ದ್ರಾಕ್ಷಿ, ಮಾವು, ಹೂವು, ಹಣ್ಣು, ತರಕಾರಿ ಸೇರಿದಂತೆ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಬೇಕು. ಬೆಳೆ ಹಾನಿ ವರದಿಗಾಗಿ ತಿಂಗಳುಗಟ್ಟಲೆ ಕಾಯಿಸದೆ, ಆದಷ್ಟು ಬೇಗ ವೈಜ್ಞಾನಿಕವಾಗಿ ಬೆಳೆ ನಷ್ಟವನ್ನು ಅಂದಾಜಿಸಿ ರೈತರ ಬ್ಯಾಂಕ್ ಖಾತೆಗೆ ಪರಿಹಾರಧನವನ್ನು ಜಮೆ ಮಾಡಬೇಕು. ವಿಶೇಷವಾಗಿ ದ್ರಾಕ್ಷಿ ಬೆಳೆಯ ವೆಚ್ಚ ಅಧಿಕವಾಗಿರುವುದರಿಂದ ಹಾನಿಗೊಳಗಾದ ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು.
-ಡಾ. ಕೆ.ಸುಧಾಕರ್, ಸಂಸದ

+ There are no comments
Add yours