ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆ ಸೇರಿದ್ದ ಸ್ಟಾರ್ ಆಲ್ರೌಂಡರ್ ಐಪಿಎಲ್ ಟೂರ್ನಿಯಿಂದಲೇ ಔಟ್!

0 min read

ಐಪಿಎಲ್ 18ನೇ ಸೀಸನ್ ಆರಂಭಕ್ಕೂ ಮುನ್ನ, ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಸೊಂಟದ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನಿಂದ ತಂಡಕ್ಕೆ ಬಂದಿದ್ದ ಕರನ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಮುಂಬೈ: ಐಪಿಎಲ್ 18ನೇ ಸೀಸನ್ ಶುರುವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜಸ್ಥಾನ ರಾಯಲ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಸೊಂಟದ ಗಾಯದ ಕಾರಣ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಕಳೆದ ನವೆಂಬರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಸ್ಯಾಮ್ ಕರನ್ ರಾಜಸ್ಥಾನ ತಂಡಕ್ಕೆ ಬಂದಿದ್ದರು. ಮಾರ್ಚ್ 5 ರಂದು ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಅವರು ಕೊನೆಯದಾಗಿ ಆಡಿದ್ದರು. ವಿಶ್ವಕಪ್ ನಂತರ ವರದಿಯಾದ ಗಾಯ ಗಂಭೀರ ಸ್ವರೂಪದ್ದು ಎಂದು ತಿಳಿದುಬಂದಿದ್ದರಿಂದ, ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಬಂದಿದ್ದ ಕರ್ರನ್

ಸಂಜು ಸ್ಯಾಮ್ಸನ್‌ರನ್ನು ಚೆನ್ನೈ ತಂಡಕ್ಕೆ ನೀಡಿ, ಅವರ ಬದಲಿಗೆ ರವೀಂದ್ರ ಜಡೇಜಾ ಜೊತೆ ಸ್ಯಾಮ್ ಕರನ್ ರಾಜಸ್ಥಾನ ತಂಡಕ್ಕೆ ಬಂದಿದ್ದರು. ಸಂಜು ಅನುಪಸ್ಥಿತಿಯನ್ನು ಸ್ಯಾಮ್ ಕರನ್‌ರ ಆಲ್‌ರೌಂಡ್ ಆಟ ತುಂಬಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈ ಬೆಳವಣಿಗೆ ದೊಡ್ಡ ನಿರಾಸೆ ಮೂಡಿಸಿದೆ. 2019ರಲ್ಲಿ ಪಂಜಾಬ್ ಕಿಂಗ್ಸ್ ಮೂಲಕ ಐಪಿಎಲ್‌ಗೆ ಕಾಲಿಟ್ಟಿದ್ದ ಕರನ್, ನಂತರ ಚೆನ್ನೈ ಹಾಗೂ ಮತ್ತೆ ಪಂಜಾಬ್ ತಂಡದಲ್ಲೂ ಆಡಿದ್ದರು. ಒಮ್ಮೆ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಎಂಬ ದಾಖಲೆಯನ್ನೂ ಸ್ಯಾಮ್ ಕರನ್ ಬರೆದಿದ್ದರು. ಆಗ ಪಂಜಾಬ್ ತಂಡ ಅವರನ್ನು 18.5 ಕೋಟಿ ರೂಪಾಯಿಗೆ ಖರೀದಿಸಿತ್ತು.

ಸ್ಯಾಮ್ ಕರನ್‌ಗೆ ಬದಲಿ ಆಟಗಾರ ಯಾರು ಎಂಬುದನ್ನು ರಾಜಸ್ಥಾನ ರಾಯಲ್ಸ್ ಇನ್ನೂ ಪ್ರಕಟಿಸಿಲ್ಲ. ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಟ್ರೇಡ್ ಮೂಲಕ ತಂಡ ಸೇರಿರುವ ದಕ್ಷಿಣ ಆಫ್ರಿಕಾದ ಆಟಗಾರ ಡೊನೊವನ್ ಫೆರೇರಾರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಫೆರೇರಾ ಒಬ್ಬ ಉತ್ತಮ ಪವರ್ ಹಿಟ್ಟರ್ ಆಗಿದ್ದು, ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲರು.

ಪ್ರತಿಭಾನ್ವಿತ ಆಟಗಾರರ ದಂಡು ಹೊಂದಿರುವ ರಾಜಸ್ಥಾನ ರಾಯಲ್ಸ್

ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿಭಾನ್ವಿತ ಯುವ ಬ್ಯಾಟರ್ ರಿಯಾನ್ ಪರಾಗ್ ಮುನ್ನಡೆಸಲಿದ್ದು, ಶ್ರೀಲಂಕಾದ ಕ್ರಿಕೆಟ್ ದಂತಕಥೆ ಕುಮಾರ ಸಂಗಕ್ಕರ ಮಾರ್ಗದರ್ಶನ ನೀಡಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಜೋಫ್ರಾ ಆರ್ಚರ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ಸೇರ್ಪಡೆ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

You May Also Like

More From Author

+ There are no comments

Add yours