ಬೆಂಗಳೂರು,ಏ.10- ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ದಾಖಲೆಯ ಶೇಕಡಾ 81.15 ರಷ್ಟು ಫಲಿತಾಂಶ ಬಂದಿದೆ.ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರದೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಫಲಿತಾಂಶ ಏರಿಕೆಯಾಗಿದೆ.
2023 ರಲ್ಲಿ 74.67 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.6.4 ರಷ್ಟು ಏರಿಕೆಯಾಗಿದ್ದು, ದಾಖಲೆಯ 81.15 ರಷ್ಟು ಫಲಿತಾಂಶ ದಾಖಲಾಗಿರುವುದು ವರ್ಷದಿಂದ ವರ್ಷಕ್ಕೆ ಫಲಿತಾಂಶ ಏರಿಕೆಯಾಗುತ್ತಿರುವುದರ ಸಕಾರಾತ್ಮಕ ಬೆಳವಣಿಗೆಯಾಗಿದೆ.ಕಳೆದ ಮಾರ್ಚ್ 1 ರಿಂದ 27 ರವರೆಗೆ ರಾಜ್ಯದ 1,124 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ-1 ರ ಪರೀಕ್ಷೆಗೆ ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 5,22,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾವಿಭಾಗದಲ್ಲಿ ಶೇ.68.36, ವಾಣಿಜ್ಯ ಶೇ.80.94, ವಿಜ್ಞಾನ ಶೇ.89.96 ಫಲಿತಾಂಶ ಹೊರಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಎಂದಿನಂತೆ ಈ ಬಾರಿಯೂ ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಕ್ರಮವಾಗಿ ಮೊದಲ ಸ್ಥಾನದಲ್ಲಿದ್ದರೆ, ಗದಗ ಕೊನೆಯ ಸ್ಥಾನದಲ್ಲಿದೆ.
ಕಲಾವಿಭಾಗದಲ್ಲಿ ಬೆಂಗಳೂರಿನ ಎನ್‍ಎನ್‍ಕೆಆರ್‍ವಿ ಪಿಯು ಕಾಲೇಜಿನ ಮೇಧಾ ಡಿ. 596, ವಿಜಯಪುರದ ಎಸ್‍ಎಸ್ ಪಿಯು ಕಾಲೇಜಿನ ವೇದಾಂತ್ ಜಯನುಬಾ ನವಿ 596, ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಗಿಯ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ. 596 ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿ ಪಿಯು ಕಾಲೇಜಿನ ಜ್ಞಾನವಿ ಎಂ. 597, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜಿನ ಪವನ್ ಎಂ.ಎಸ್. 596, ಉಡುಪಿಯ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ಹರ್ಷಿತಾ ಎಸ್.ಎಚ್. 596 ಅಂಕ ಪಡೆದಿದ್ದಾರೆ.
ಈ ಬಾರಿ ಪರೀಕ್ಷೆಗೆ ಹಾಜರಾದ 6,22,819 ಹೊಸ ವಿದ್ಯಾರ್ಥಿಗಳ ಪೈಕಿ 5,26,558 (84.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ 36,007 ವಿದ್ಯಾರ್ಥಿಗಳಲ್ಲಿ ಹಾಜರಾದವರ ಪೈಕಿ 15,116 ವಿದ್ಯಾರ್ಥಿಗಳು (41.98), 22,253 ಖಾಸಗಿ ವಿದ್ಯಾರ್ಥಿಗಳ ಪೈಕಿ 10,716 (48.16) ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ 1,87,891 ಹಾಜರಾದ ವಿದ್ಯಾರ್ಥಿಗಳ ಪೈಕಿ 1,28,448 (68.36), ವಾಣಿಜ್ಯ ವಿಭಾಗದಲ್ಲಿ 2,15,357 ಹಾಜರಾದವರ ಪೈಕಿ 1,74,315 (80.94), ವಿಜ್ಞಾನ ವಿಭಾಗದಲ್ಲಿ 2,77,831 ಹಾಜರಾದವರ ಪೈಕಿ 249927 (89.96) ಫಲಿತಾಂಶ ಪ್ರಕಟಗೊಂಡಿದೆ.
+ There are no comments
Add yours