ಡಿಕೆಶಿಯನ್ನು ರಕ್ಷಿಸಲೆಂದೇ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್‌: ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ

1 min read

ಹೈಲೈಟ್ಸ್‌:

  • ಡಿಕೆ ಶಿವಕುಮಾರ್ ವಿರುದ್ಧ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ
  • ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ರಕ್ಷಿಸುವ ಉದ್ದೇಶದಿಂದಲೇ ತನಿಖೆ ವಾಪಸ್
  • ಸಿಬಿಐ ತನಿಖೆಗೆ ಒಮ್ಮೆ ವಹಿಸಿದ ಪ್ರಕರಣವನ್ನು ಬಳಿಕ ಹಿಂಪಡೆಯಲು ಸಾಧ್ಯವಿಲ್ಲ

ಬೆಂಗಳೂರು: ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ರಕ್ಷಿಸುವ ಉದ್ದೇಶದಿಂದಲೇ ಅವರ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸರಕಾರ ವಾಪಸ್‌ ಪಡೆದಿದೆ ಎಂದು ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಪರ ವಕೀಲರು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದರು.

ಡಿ.ಕೆ. ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದು ಕಾಂಗ್ರೆಸ್‌ ಸರಕಾರ 2023ರ ನ. 28ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು.

ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್‌, ”ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಒಮ್ಮೆ ಸಿಬಿಐ ತನಿಖೆಗೆ ನೀಡಿದ ಅನುಮತಿ ಹಿಂಪಡೆಯಲು ಅವಕಾಶವಿಲ್ಲ. ಹಾಗಾಗಿ, ಸರಕಾರದ ಕ್ರಮ ಕಾನೂನುಬಾಹಿರ. ಡಿಸಿಎಂ ಶಿವಕುಮಾರ್‌ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ಸರಕಾರ ಸುಪ್ರಿಂಕೋರ್ಟ್‌ ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದೆ,” ಎಂದು ಆರೋಪಿಸಿದರು.

ಯತ್ನಾಳ್‌ ಪರ ವಾದಿಸಿದ ವಕೀಲ ವೆಂಕಟೇಶ್‌ ಪಿ. ದಳವಾಯಿ, ”ಸರಕಾರದ ಆದೇಶ ಪ್ರಶ್ನಿಸುವ ಅವಕಾಶ ಅರ್ಜಿದಾರರಿಗೆ ಇದೆ. 2023ರ ನ. 28ರಂದು ಸಿಬಿಐಗೆ ನೀಡಿದ್ದ ಅನುಮತಿಯನ್ನು ಸರಕಾರ ಹಿಂಪಡೆದಿತ್ತು. ಈ ಕ್ರಮ ಪ್ರಶ್ನಿಸಿ ಡಿ.5ರಂದು ಹೈಕೋರ್ಟ್‌ಗೆ ಯತ್ನಾಳ್‌ ಅರ್ಜಿ ಸಲ್ಲಿಸಿದ್ದಾರೆ. ಆ ನಂತರ ಡಿ. 22 ರಂದು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಸರಕಾರ ವರ್ಗಾಯಿಸಿದೆ. ಸಿಬಿಐ ತನಿಖೆಗೆ ಒಮ್ಮೆ ವಹಿಸಿದ ಪ್ರಕರಣವನ್ನು ಬಳಿಕ ಹಿಂಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ಆದೇಶ ರದ್ದುಪಡಿಸಬೇಕು,” ಎಂದು ಕೋರಿದರು.

ಡಿ.ಕೆ. ಶಿವಕುಮಾರ್‌ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ, ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಅದಕ್ಕೆ ಸಮ್ಮತಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ. ಅಂದು ಬೆಳಗಿನ ಕಲಾಪದಲ್ಲಿಯೇ ಅರ್ಜಿ ವಿಚಾರಣೆ ನಡೆಸುವಂತೆ ಕೋರಿ ಅರ್ಜಿದಾರರ ಹಾಗೂ ಡಿಕೆಶಿ ಪರ ವಕೀಲರು ಜಂಟಿ ಮೆಮೋ ಸಲ್ಲಿಸಿದರು.

ವಿಚಾರಣೆ ವೇಳೆ ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿರುವ ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಹಾಗೂ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ ಶೆಟ್ಟಿ ಹಾಜರಿದ್ದರು.

You May Also Like

More From Author

+ There are no comments

Add yours