Navy Helicopters Collide: ನವದೆಹಲಿ: ನೌಕಾಪಡೆಯ ಹೆಲಿಕಾಪ್ಟರ್‌ಗಳು ಪೂರ್ವಾಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಲ್ಲದೇ ಅದರಲ್ಲಿದ್ದ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಮಲೇಷ್ಯಾದಲ್ಲಿ (Malaysia) ನಡೆದಿದ್ದು, ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ರಾಯಲ್ ಮಲೇಷಿಯನ್ ನೇವಿ ಆಫ್ ಮಲೇಷಿಯಾದ ವಾರ್ಷಿಕ ಕಾರ್ಯಕ್ರಮದ ಪೂರ್ವಾಭ್ಯಾಸದ ವೇಳೆ ಎರಡೂ ಸೇನಾ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿದೆ.
ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ ಸ್ಟೇಡಿಯಂನಲ್ಲಿ ನೌಕಾಪಡೆಯ ಈ ಪೂರ್ವಾಭ್ಯಾಸ ಮಂಗಳವಾರ ನಡೆಯುತ್ತಿತ್ತು. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೆಲಿಕಾಪ್ಟರ್ ಮತ್ತೊಂದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ಎರಡು ಹೆಲಿಕಾಪ್ಟರ್‌ಗಳು ಫೆನೆಕ್ M502-6 ಮತ್ತು HOM M503-3 ಎಂದು ತಿಳಿದಿದೆ. ಮೊದಲ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಬಿದ್ದರೆ, ಎರಡನೆಯದು ಈಜುಕೊಳದಲ್ಲಿ ಬಿದ್ದಿದೆ.
ಘಟನೆಯ ಬಗ್ಗೆ ಮಲೇಷ್ಯಾ ನೌಕಾಪಡೆ ಹೇಳಿದ್ದೇನು?
ನೌಕಾಪಡೆಯ 90 ನೇ ವಾರ್ಷಿಕೋತ್ಸವದಂದು ಮೇ 3 ಮತ್ತು 5 ರ ನಡುವೆ ನಡೆಯಲಿರುವ ಮಿಲಿಟರಿ ಪರೇಡ್‌ಗಾಗಿ ಈ ಹೆಲಿಕಾಪ್ಟರ್‌ಗಳು ತಾಲೀಮು ನಡೆಸುತ್ತಿತ್ತು ಎಂದು ಮಲೇಷ್ಯಾ ನೌಕಾಪಡೆಯು ಘಟನೆಯ ಕುರಿತು ಹೇಳಿಕೆಯನ್ನು ನೀಡಿದೆ. ಈ ಘಟನೆಯಲ್ಲಿ ಹತ್ತು ಜನರ ಸಾವನ್ನು ನೌಕಾಪಡೆ ಖಚಿತಪಡಿಸಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹೆಲಿಕಾಪ್ಟರ್‌ನ ಸಿಬ್ಬಂದಿಗಳು. ಮೃತದೇಹಗಳನ್ನು ಗುರುತಿಸಲು ಲುಮುಟ್ ಏರ್ ಬೇಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಂಗಳವಾರ ಬೆಳಗ್ಗೆ ಸ್ಥಳೀಯ ಕಾಲಮಾನ 9.32ಕ್ಕೆ ಈ ಘಟನೆ ನಡೆದಿದೆ.
ಈ ಘಟನೆಯ ತನಿಖೆಗೆ ಆಯೋಗವನ್ನು ರಚಿಸಲು ಆಡಳಿತ ನಿರ್ಧರಿಸಿದೆ. ದೇಶದಲ್ಲಿ ಪದೇ ಪದೇ ಮಿಲಿಟರಿ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗುವ ಘಟನೆಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಕಳೆದ ತಿಂಗಳು, ಮಲೇಷಿಯಾದ ಮಾರಿಟೈಮ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (ಎಂಎಂಇಎ) ಹೆಲಿಕಾಪ್ಟರ್ ಪಾರುಗಾಣಿಕಾ ಡ್ರಿಲ್‌ನಲ್ಲಿ ಸೆಲಂಗೋರ್‌ನ ಪುಲೌ ಅಂಗ್ಸಾ ಬಳಿ ಅಪಘಾತಕ್ಕೀಡಾಯಿತು. ಮಾರ್ಚ್ 5 ರಂದು ಈ ಘಟನೆ ನಡೆದಿದ್ದು, ಪೈಲಟ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು.
+ There are no comments
Add yours