Arunachal Pradesh Election Results 2024: ಅರುಣಾಚಲ ಪ್ರದೇಶದಲ್ಲಿ ಮತ್ತೆ ಅರಳಿದ ಕಮಲ: ಭರ್ಜರಿ ಬಹುಮತದತ್ತ ಬಿಜೆಪಿ

0 min read

ಹೈಲೈಟ್ಸ್‌:

  • ಏಪ್ರಿಲ್ 19ರಂದು ಅರುಣಾಚಲ ಪ್ರದೇಶದಲ್ಲಿ ಏಕಕಾಲಕ್ಕೆ ನಡೆದಿದ್ದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ
  • 60 ಸ್ಥಾನಗಳ ವಿಧಾನಸಭೆಯಲ್ಲಿ, 10 ಸ್ಥಾನಗಳಿಗೆ ಎದುರಾಳಿಗಳೇ ಇಲ್ಲದೆ ಅವಿರೋಧವಾಗಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ
  • ಅರುಣಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಇರುವ 31 ಸೀಟುಗಳನ್ನು ದಾಟಿ ಮುನ್ನಡೆ ಪಡೆದಿರುವ ಬಿಜೆಪಿ

ಇಟಾನಗರ: ಅರುಣಾಚಲ ಪ್ರದೇಶಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವತ್ತ ಬಲವಾದ ಹೆಜ್ಜೆ ಇರಿಸಿದೆ. ಸಿಎಂ ಪೇಮಾ ಖಂಡು ಅವರು ಮೂರನೇ ಅವಧಿಗೆ ಗದ್ದುಗೆ ಏರಲು ಸಿದ್ಧತೆ ನಡೆಸಿದ್ದಾರೆ. 60 ಸೀಟುಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗುತ್ತಿದ್ದು, ಇದರಲ್ಲಿ ಬಿಜೆಪಿ ಈಗಾಗಲೇ ಬಹುಮತಕ್ಕೆ ಅಗತ್ಯವಾದ ಅರ್ಧದ ಗಡಿಯನ್ನು ದಾಟಿ ಭಾರಿ ಮುನ್ನಡೆ ಪಡೆದಿದೆ.

60 ಕ್ಷೇತ್ರಗಳ ಪೈಕಿ ಬಿಜೆಪಿಗೆ ಯಾವುದೇ ಎದುರಾಳಿ ಇಲ್ಲದೆ, 10 ಸೀಟುಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ ಉಳಿದ 50 ಸೀಟುಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಆರಂಭವಾಗಿದ್ದು, ಒಟ್ಟಾರೆಯಾಗಿ ಬಿಜೆಪಿ 42 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಅಧಿಕಾರಕ್ಕೆ ಬರಲು 31 ಸೀಟುಗಳ ಅಗತ್ಯವಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎಂಟು ಸೀಟುಗಳಲ್ಲಿ ಮುನ್ನಡೆ ಪಡೆದಿದ್ದರೆ, ಇತರರು ಏಳು ಸ್ಥಾನಗಳಲ್ಲಿ ಮುಂದಿದ್ದಾರೆ. ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ.24 ಜಿಲ್ಲೆಗಳ ಕೇಂದ್ರ ಭಾಗದಲ್ಲಿ ಬೆಳಿಗ್ಗೆ 6 ಗಂಟೆಗೆ ಭಾರಿ ಭದ್ರತೆ ನಡುವೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಭಾರಿ ಮಳೆಯ ಕಾರಣ ಮತ ಎಣಿಕೆ ಕಾರ್ಯಕ್ಕೆ ತೊಡಕು ಉಂಟಾಗಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಏಪ್ರಿಲ್ 19ರಂದು ನಡೆದ ಮೊದಲ ಹಂತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿತ್ತು. 60 ವಿಧಾನಸಭೆ ಹಾಗೂ ಎರಡು ಲೋಕಸಭೆ ಕ್ಷೇತ್ರಗಳು ಈಶಾನ್ಯ ರಾಜ್ಯದಲ್ಲಿದೆ. ಆಂಧ್ರಪ್ರದೇಶ ಹಾಗೂ ಒಡಿಶಾ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶದೊಂದಿಗೇ ಪ್ರಕಟವಾಗಲಿವೆ. ಆದರೆ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಮಾತ್ರ ಜೂನ್ 2ರಂದು ಫಲಿತಾಂಶ ಪ್ರಕಟವಾಗುತ್ತಿದೆ.

You May Also Like

More From Author

+ There are no comments

Add yours